ತುರುವೇಕೆರೆ: ಸರ್ಕಾರಿ ಗೋಮಾಳ ಜಮೀನಿಗೆ ಅಕ್ರಮವಾಗಿ ಖಾತೆ ಮಾಡಿರುವ ಮಾಡಿರುವ ಆರ್ಐ ಹಾಗೂ ಗ್ರಾಮ ಆಡಳಿತಾಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ಕಣಕೂರು ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಅಧಿಕಾರಿಗಳು ಅರ್ಹ ರೈತರ ಪೌತಿ ಖಾತೆ ಅರ್ಜಿಗಳನ್ನು, ರೈತರು ಹಣ ಕೊಡದ ಕಾರಣ, ಉದ್ದೇಶಪೂರ್ವಕವಾಗಿ ಸುಖಾ ಸುಮ್ಮನೆ ತಿರಸ್ಕರಿಸಿ ಅಲೆದಾಡಿಸುತ್ತಿದ್ದಾರೆ. ಮಾಯಸಂದ್ರ ಹೋಬಳಿನ ಬ್ಯಾಲಗ್ರಾಮದ ಸರ್ವೆ ನಂ. 1ರಲ್ಲಿ ಮೂರು ಎಕರೆ ವಿಸ್ತೀರ್ಣದಂತೆ ದುರಸ್ತಿ ಮತ್ತು ಪೋಡು ಆಗದಿರುವ ಜಮೀನು ಮಂಜೂರು ಆಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ವಂಚಿಸಿದ್ದಾರೆ.
ಈ ಸಂಬಂಧ, ಸರ್ಕಾರಿ ಜಮೀನನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿ ಕಾವೇರಿ ತಂತ್ರಾಂಶದಿಂದ ಭೂಮಿ ಕೇಂದ್ರಕ್ಕೆ ಬರುವ ನಮೂನೆ 12 ಮತ್ತು 21ರ ಪ್ರಕ್ರಿಯೆಗೆ ನಿಗದಿತ 7 ದಿನಗಳ ಕಾಲಮಿತಿಯಿರುತ್ತದೆ. ಆದರೆ, ಸಂಬಂಧಪಟ್ಟ ಆರ್ಐ ಮತ್ತು ವಿಎಓ ಈ ಅಕ್ರಮ ವ್ಯವಹಾರ ತಮ್ಮ ಗಮನಕ್ಕೆ ಬಂದರೂ ಸಹ, ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸದೆ ಅಥವಾ ನೈಜ ವರದಿ ನೀಡದೆ ಉದ್ದೇಶಪೂರ್ವಕವಾಗಿ ಕಾಲಹರಣ ಮಾಡಿ ಅಕ್ರಮ ಖಾತೆಗೆ ಶಾಮೀಲಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಅಕ್ರಮವಾಗಿ ಮಾಡಲಾದ ಖಾತೆ ಮತ್ತು ಮ್ಯುಟೇಷನ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು. ಜಿಲ್ಲಾಧಿಕಾರಿಗಳು ಈ ಪ್ರಕರಣದ ಬಗ್ಗೆ ಸಮಗ್ರ ಇಲಾಖಾ ತನಿಖೆ ನಡೆಸಬೇಕು. ಹಗರಣದಲ್ಲಿ ಶಾಮೀಲಾಗಿರುವ ಸಬ್ ರಿಜಿಸ್ಟ್ರಾರ್ ಹಾಗೂ ಕಂದಾಯ ನಿರೀಕ್ಷಕರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು. ಯಾವುದೇ ಕಾನೂನು ಕ್ರಮ ಜರುಗಿಸದಿದ್ದರೆ ಸೆ.26ರಂದು ನಡೆಯುವ ಪ್ರಜಾಸೇವಾ ಆಂದೋಲನದ ವೇದಿಕೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದರ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

