ತುರುವೇಕೆರೆ: ಸಿಎಂ ಡಿ.ಕೆ.ಶಿವಕುಮಾರ್ ಅವರ ಆಶಯದಂತೆ ಆರಂಭಿಸಿರುವ ಪ್ರಜಾಸೇವಾ ಅಭಿಯಾನವು ಈ ಹಿಂದೆ ನಡೆದ ಜನಸ್ಪಂದನ, ಜನತಾ ದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳ ಮತ್ತೊಂದು ರೂಪವಾಗಿದೆ. ಹೆಸರು ಮಾತ್ರ ಬದಲಾಗಿದ್ದು ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುವಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ತಾಲೂಕು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಆರೋಪಿಸಿದರು.
ಮಾಯಸಂದ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿಯೇ ತಕ್ಷಣ ಪರಿಹರಿಸಿದರೆ ಇಂತಹ ಕಾರ್ಯಕ್ರಮಗಳ ಅಗತ್ಯವೇ ಇರುವುದಿಲ್ಲ. ವರ್ಷಾನುಗಟ್ಟಲೆ ಕಚೇರಿಗಳಿಗೆ ಅಲೆದರೂ ಸಮಸ್ಯೆ ಬಗೆಹರಿಯದೆ ಜನರು ರೋಸಿ ಹೋಗಿದ್ದಾರೆ. ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ಈಗಿನ ಅಭಿಯಾನದಲ್ಲಿ ಅಧಿಕಾರಿಗಳು ಪರಿಹರಿಸುತ್ತಾರೆಂಬ ಭರವಸೆ ಇಲ್ಲ ಎಂದರು.
ಈ ಹಿಂದೆ ನಡೆದ ಜನಸ್ಪಂದನ, ಜನತಾ ದರ್ಶನ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೂರಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇನೆ. ಅವುಗಳ ಕುರಿತು ಆಡಳಿತ ಕೈಗೊಂಡ ಕ್ರಮಗಳ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಮತ್ತೆ ಮತ್ತೊಂದು ಕಾರ್ಯಕ್ರಮ ನಡೆಸುವುದರಿಂದ ಪ್ರಯೋಜನವಿಲ್ಲ. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಸಾರ್ವಜನಿಕರ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕರ ವರ್ತನೆಗೆ ಆಕ್ಷೇಪ: ಮಾಯಸಂದ್ರದಲ್ಲಿ ನಡೆದ ಪ್ರಜಾಸೇವಾ ಅಭಿಯಾನದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದಾದಾಗ ಶಾಸಕರು ಅವರನ್ನು ಗದರಿಸಿರುವುದು ಸರಿಯಲ್ಲ, ಜನರನ್ನು ಏಕವಚನದಲ್ಲಿ ಸಂಬೋಧಿಸುವುದು ಸೂಕ್ತವಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅವರ ಸಮಸ್ಯೆಗಳನ್ನು ಸಾವಧಾನವಾಗಿ ಆಲಿಸಿ ಪರಿಹಾರ ಕಲ್ಪಿಸುವುದು ಕರ್ತವ್ಯ. ಜನರನ್ನು ದಬ್ಬಾಳಿಕೆಯಿಂದ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಕಣಕೂರು ಚಂದ್ರಶೇಖರ್ ಹೇಳಿದರು.

