ತುರುವೇಕೆರೆ ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ಪ್ರಜಾ ಸೇವಾ ಅಭಿಯಾನದ ಸಂದರ್ಭದಲ್ಲಿ, ಹಲವು ವರ್ಷಗಳಿಂದ ನಿರ್ಮಾಣಗೊಂಡಿದ್ದ ವಾಣಿಜ್ಯ ಸಂಕೀರ್ಣವನ್ನು ತಕ್ಷಣ ಪ್ರಾರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ಹೃದಯ ಭಾಗದಲ್ಲಿ ಸುಮಾರು ₹10 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣದಲ್ಲಿ 36 ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಳಿಗೆಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡು ಒಂದು ವರ್ಷ ಕಳೆದಿದ್ದರೂ ಸಂಕೀರ್ಣ ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಈ ವಿಳಂಬದಿಂದ ಪಟ್ಟಣ ಪಂಚಾಯಿತಿಗೆ ಆದಾಯ ನಷ್ಟವಾಗುತ್ತಿದ್ದು, ಬೀದಿ ವ್ಯಾಪಾರಿಗಳ ಸಮಸ್ಯೆಗೂ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಪ್ರಶ್ನಿಸಿದರು. ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ, ಮಳಿಗೆಗಳನ್ನು ಬಳಕೆಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಕುಂ. ಅಹಮದ್ ಅವರು, ನ್ಯಾಯಾಲಯದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಂಡು, ಬೀದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನಿಗದಿಪಡಿಸಿದ ನಂತರ ವಾಣಿಜ್ಯ ಸಂಕೀರ್ಣವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಅದೇ ಸಂದರ್ಭದಲ್ಲಿ ಹೇಮಾವತಿ ನೀರನ್ನು ಕೆರೆ-ಕಟ್ಟೆಗಳಿಗೆ ಹರಿಸುವುದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಸೇರಿದಂತೆ ತಾಲೂಕಿನ ರೈತರ ವಿವಿಧ ಸಮಸ್ಯೆಗಳನ್ನೂ ಅಧಿಕಾರಿಗಳ ಗಮನಕ್ಕೆ ತರಲಾಯಿತು.

